ಕಿರುತೆರೆಯನ್ನು ನಂಬಿ ಬದುಕು ಸಾಗಿಸುತಿದ್ದವರಿಗೆ ಕಂಟಕವಾದ ಡಬ್ಬಿಂಗ್ ಎಂಬ ಭೂತ…!

Dubbing

ಕನ್ನಡ ಚಿತ್ರರಂಗವನ್ನು ಮತ್ತು ಟಿವಿ ಧಾರಾವಾಹಿಗಳನ್ನೆ ನಂಬಿ ಬದುಕು ಸಾಗಿಸುತ್ತಿರುವ ಅನೇಕ ನಟ ನಟಿಯರು ಮತ್ತು ಕಾರ್ಮಿಕ ವರ್ಗವನ್ನು ನಿರುದ್ಯೋಗಿಗಳಾಗಿ ಮಾಡಲು ಹೊರಟಿರುವ ಡಬ್ಬಿಂಗ್ ಎಂಬ ಭೂತ ಕನ್ನಡ ಕಿರುತೆರೆಯನ್ನು ಆಗಲೇ ತನ್ನ ತೆಕ್ಕೆಗೆ ತೆಗೆದು ಕೊಂಡಿದೆ.

ಈಗ ಅನೇಕ ಕನ್ನಡ ವಾಹಿನಿಗಳನ್ನು ಗಮನಿಸಿದರೆ ತಮಿಳು, ತೆಲುಗು, ಹಿಂದಿ ಮತ್ತು ಅನೇಕ ಭಾಷೆಗಳಿಂದ ಡಬ್ ಮಾಡಿದ ಧಾರಾವಾಹಿ ಮತ್ತು ಚಲನಚಿತ್ರಗಳನ್ನು ಎತ್ತೆಚ್ಚವಾಗಿ ಪ್ರಸಾರ ಮಾಡುತ್ತಿವೆ. ಅಲ್ಲದೇ ಕೊರೊನ ವೈರಸ್ ಲಾಕ್ ಡೌನ್ ಗೂ ಮೊದಲು ಪ್ರಸಾರವಾಗುತಿದ್ದ ಅನೇಕ ಧಾರಾವಾಹಿಗಳ ಜಾಗದಲ್ಲಿ ಇಂದು ಪರಭಾಷೆಯಿಂದ ಡಬ್ ಮಾಡಿದ ಧಾರಾವಾಹಿಗಳು ಬಂದು ಆ ಜಾಗದಲ್ಲಿ ಕೂತಿವೆ.

ಈ ಕೊರೊನ ವೈರಸ್ ಮತ್ತು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿ ಬದುಕು ಸಾಗಿಸಲು ಸಂಕಷ್ಟ ಪಡುತ್ತಿರುವ ಅನೇಕ ಸಣ್ಣ ನಟ ನಟಿಯರು ಹಾಗು ಕಾರ್ಮಿಕ ವರ್ಗಕ್ಕೆ ಲಾಕ್ ಡೌನ್ ಮುಗಿದರು ಕೆಲಸ ಸಿಗದಿರುವುದು ವಿಷಾದನೀಯ. ಲಾಕ್ ಡೌನ್ ಗೂ ಮೊದಲು ಪ್ರಸಾರವಾಗುತಿದ್ದ ಅನೇಕ ಕನ್ನಡ ಧಾರಾವಾಹಿಗಳು ಲಾಕ್ ಡೌನ್ ನಿಂದಾಗಿ ಶೂಟಿಂಗ್ ನಿಲ್ಲಿಸಿದ್ದವು ಆದ್ದರಿಂದ ಆ ಸಮಯದಲ್ಲಿ ಆ ಧಾರಾವಾಹಿಗಳ ಹೊಸ ಸಂಚಿಕೆ ಸಿಗದೇ, ಹಳೆಯ ಸಂಚಿಕೆಗಳನ್ನೆ ಮರು ಪ್ರಸಾರ ಮಾಡುತಿದ್ದರು. ಅದರೇ ಈಗ ಲಾಕ್ ಡೌನ್ ಮುಗಿದರು ಕೆಲವು ಧಾರಾವಾಹಿಗಳು ಇನ್ನೂ ಶೂಟಿಂಗ್ ಅನ್ನೇ ಪ್ರಾರಂಭಿಸಿಲ್ಲ. ಆ ಧಾರಾವಾಹಿಗಳನ್ನು ನಂಬಿ ದುಡಿಯುತಿದ್ದ ಅನೇಕ ಜನರು ಈಗ ನಿರುದ್ಯೋಗಿಗಳಾಗಿರುವುದು ಸುಳ್ಳಲ್ಲ.

ಈಗ ಪ್ರಸಾರವಾಗುತ್ತಿರುವ ಪರಭಾಷೆಯ ಡಬ್ ಮಾಡಿದ ಹೆಚ್ಚು ಧಾರಾವಾಹಿಗಳು ಎಲ್ಲವೂ ಆ ಭಾಷೆಗಳಲ್ಲಿ ಹಿಟ್ ಆದ ಧಾರಾವಾಹಿಗಳು ಅವುಗಳನ್ನು ಇಲ್ಲಿ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಆ ಧಾರಾವಾಹಿಗಳು ಕನಿಷ್ಠ ಅಂದರು ಇನ್ನು ಎರಡು ವರ್ಷಗಳ ಕಾಲ ಪ್ರಸಾರ ವಾಗಲಿವೆ ಏಕೆಂದರೆ ಆ ಧಾರಾವಾಹಿಗಳ ಸಂಚಿಕೆಗಳು 500 ರಿಂದ 600 ಕ್ಕೂ ಹೆಚ್ಚು ಸಂಚಿಕೆಗಳಿವೆ.

ಎಲ್ಲವನ್ನೂ ಲಾಭದ ದೃಷ್ಟಿಯಲ್ಲಿ ಇಟ್ಟುಕೊಂಡು ಬರೀ ಪರಭಾಷೆಯ ಡಬ್ ಧಾರಾವಾಹಿಗಳಿಗೆ ಮಣೆ ಹಾಕಿದರೆ ಮುಂದೊಂದು ದಿನ ಕಿರುತೆರೆಯನ್ನು ನಂಬಿ ಬದುಕು ಕಟ್ಟಿಕೊಂಡಿರುವವರು ಬೀದಿಗೆ ಬರುವುದು ಕಟು ಸತ್ಯ. ಕಳೆದ ಅನೇಕ ವರ್ಷಗಳಿಂದ ಹಚ್ಚ ಕನ್ನಡದ ಧಾರಾವಾಹಿಗಳನ್ನು ಪ್ರಸಾರ ಮಾಡಿ ಆ ಧಾರಾವಾಹಿಗಳಿಂದಲೆ ತಮ್ಮ ವಾಹಿನಿಯನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದ ಅನೇಕ ಉದಾಹರಣೆಗಳು ಕಣ್ಮುಂದೆ ಇವೆ. ಈಗ ಅದೇ ಕನ್ನಡ ಧಾರಾವಾಹಿಗಳನ್ನು ಕಡೆ ಗಣಿಸಿ ಪರಭಾಷೆಯ ಡಬ್ ಧಾರಾವಾಹಿ ಗಳಿಗೆ ಮಣೆ ಹಾಕುವುದು ತುಂಬಾ ಬೇಸರದ ಸಂಗತಿ.

ಇನ್ನು ಚಲನಚಿತ್ರ ಗಳ ಸರದಿಗೆ ಬಂದರೆ ಶನಿವಾರ, ಭಾನುವಾರ ಬಂತೆದರೆ ಬರಿ ಪರಭಾಷೆಯಿಂದ ಡಬ್ ಮಾಡಿದ ಚಲನಚಿತ್ರಗಳೆ ಪ್ರಸಾರವೆ ಹೆಚ್ಚಾಗಿದೆ ಜೊತೆಗೆ ಕಿರುತೆರೆಯಲ್ಲಿ ನಮ್ಮ ಹಚ್ಚ ಕನ್ನಡದ ಚಲನಚಿತ್ರಗಳ ಜೊತೆ ಪೈ ಪೋಟಿ ನಡೆಸುತ್ತಿವೆ.

ಇದೆಲ್ಲವನ್ನು ಮುಂದಾಲೋಚನೆ ಮಾಡಿದ್ದ ಡಾ.ರಾಜ್ ಕುಮಾರ್ ಅವರು ಡಬ್ಬಿಂಗ್ ಅನ್ನು ವಿರೋಧಿಸುತಿದ್ದರು. ಈಗಲಾದರೂ ಡಬ್ಬಿಂಗ್ ವಿರುದ್ಧ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿ ನಮ್ಮ ಕಿರುತೆರೆಯ ಕಾರ್ಮಿಕರಗಿ ಕೆಲಸ ಸಿಗುವಂತೆ ನೋಡಿ ಕೊಳ್ಳುವ ಕೆಲಸವನ್ನು ಕನ್ನಡ ಚಿತ್ರರಂಗ ಮಂಡಳಿ ಮಾಡಬೇಕಿದೆ.
Leave a Reply

Your email address will not be published. Required fields are marked *