ನಾಲೆಯ ಬಳಿ ಬೈಕ್ ಮತ್ತು ಚಪ್ಪಲಿ ಬಿಟ್ಟು ಕಣ್ಮರೆಯಾಗಿದ್ದ ಪ್ರೇಮಿಗಳು ಶವವಾಗಿ ಪತ್ತೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಸಮೀಪದ ನಾಲೆಯ ಪಕ್ಕದಲ್ಲಿ ಬೈಕ್ ಮತ್ತು ಚಪ್ಪಲಿಗಳನ್ನು ಬಿಟ್ಟು ಕಣ್ಮರೆಯಾಗಿದ್ದ ಇಬ್ಬರು ಪ್ರೇಮಿಗಳು ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಚನ್ನರಾಯಪಟ್ಟಣದ ಹಿರೀಸಾವೆ ಹೋಬಳಿ ಮತಿಘಟ್ಟ ಗ್ರಾಮದ ಸಣ್ಣಪ್ಪ ಎಂಬುವರ ಪುತ್ರನಾಗಿರುವ ರಮೇಶ್ (19) ಹಾಗೂ ಹಿರೀಸಾವೆ ಗ್ರಾಮದ ಶೇಖರ್ ಎಂಬುವರ ಪುತ್ರಿ ಸುಶ್ಮಿತಾ (19) ಮೃತ ಪಟ್ಟ ಪ್ರೇಮಿಗಳು.

ಬಾಗೂರಿನಲ್ಲಿ ಐಟಿಐ ಓದುತ್ತಿದ್ದ ರಮೇಶ್ ಹಾಗೂ ಪದವಿ ಓದುತ್ತಿದ್ದ ಸುಶ್ಮಿತಾ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು, ಅದರೆ ಇಬ್ಬರದು ಬೇರೆ ಜಾತಿ ಎಂಬ ಕಾರಣಕ್ಕೆ ಮನೆಯವರು ತಮ್ಮ ಪ್ರೀತಿಯನ್ನು ವಿರೋಧಿಸಬಹುದು ಎಂದು ಹೆದರಿದ ಪ್ರೇಮಿಗಳು ನವಂಬರ್ 17 ರಂದು ಬಾಗೂರು ಸಮೀಪ ಹೇಮಾವತಿ ನಾಲೆಯ ಸುರಂಗದ ಬಳಿ ಬೈಕ್ ನಿಲ್ಲಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಾಲೆಯ ಬಳಿ ಬೈಕ್ ಹಾಗೂ ಚಪ್ಪಲಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರೇಮಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ, ಅದರೆ ಗುರುವಾರ ಸಂಜೆ ತಿಪಟೂರು ತಾಲೂಕು ನೊಣವಿನಕೆರೆ ಬಳಿ ನಾಲೆಯಲ್ಲಿ ಪ್ರೇಮಿಗಳಿಬ್ಬರು ಅಪ್ಪಿಕೊಂಡು ವೇಲ್‌ನಿಂದ ಸೊಂಟಕ್ಕೆ ಕಟ್ಟಿಕೊಂಡ ಸ್ಥಿತಿಯಲ್ಲಿದ್ದ ಜೋಡಿ ಶವಗಳು ನಾಲೆಯಲ್ಲಿ ತೇಲುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಇದನ್ನು ಗಮನಿಸಿದ ನೊಣವಿನಕೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದರು.

ಎರಡು ದಿನಗಳ ಹಿಂದೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಸುಶ್ಮಿತಾ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಅದರ ಆಧಾರದ ಮೇಲೆ ಈ ಪ್ರೇಮಿಗಳ ಗುರುತು ಪತ್ತೆ ಹಚ್ಚಲಾಗಿದ್ದು. ನೊಣವಿನಕೆರೆ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಎರಡೂ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಮತಿಘಟ್ಟ ಗ್ರಾಮದಲ್ಲಿ ರಮೇಶ್ ಹಾಗೂ ಹಿರೀಸಾವೆಯಲ್ಲಿ ಸುಶ್ಮಿತಾಳ ಅಂತ್ಯಸಂಸ್ಕಾರ ಗುರುವಾರ ರಾತ್ರಿ ನಡೆಯಿತು. ಸುಶ್ಮಿತಾ ನಾಪತ್ತೆಯಾಗಿರುವ ಪ್ರಕರಣ ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೆ, ಮೃತದೇಹಗಳು ಪತ್ತೆಯಾಗಿರುವ ಪ್ರಕರಣ ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *