ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ..!

Bhagawan

ಬೆಂಗಳೂರು: ಹಿಂದೂ ಧರ್ಮ ಮತ್ತು ಶ್ರೀ ರಾಮ ನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದವನ್ನು ತನ್ನ  ಮೈಮೇಲೆ ಎಳೆದುಕೊಂಡಿದ್ದ ಸಾಹಿತಿ ಕೆಎಸ್ ಭಗವಾನ್ ಅವರ ಮುಖಕ್ಕೆ ವಕೀಲೆಯೊಬ್ಬರು ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿರುವ ಘಟನೆ ಇಂದು ನಡೆದಿದೆ.

ಹಿಂದೂ ಧರ್ಮ ಮತ್ತು ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ  ಸಾಹಿತಿ ಭಗವಾನ್ ವಿರುದ್ಧ ವಕೀಲೆ ಮೀರಾ ರಾಘವೇಂದ್ರ ಖಾಸಗಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಹಿತಿ ಭಗವಾನ್ ಇಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಭಗವಾನ್ ಗೆ ಜಾಮೀನು ಮಂಜೂರು ಮಾಡಿತ್ತು. ವಿಚಾರಣೆ ಮುಗಿದ ಬಳಿಕ ಕೋರ್ಟ್ ನಿಂದ ಹೊರಬರುತಿದ್ದ ಭಗವಾನ್ ಅವರ ಮುಖಕ್ಕೆ ಮೀರಾ ರಾಘವೇಂದ್ರ ಮಸಿ ಬಳಿದಿದ್ದಾರೆ.

ಕೆಎಸ್ ಭಗವಾನ್ ರ ವಿವಾದಾತ್ಮಕ ಹೇಳಿಕೆಗಳು

ಹಿಂದೂ ಧರ್ಮ ಧರ್ಮವೇ ಅಲ್ಲ. ಹಿಂದೂ ಧರ್ಮ ಎಂದರೆ ಬ್ರಾಹ್ಮಣರು ಎಂದರ್ಥ. ಗ್ರಾಮೀಣ ಜನರಿಗೆ ಹಿಂದೂ ಎಂದರೆ ಏನೆಂದು ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಎಂದು ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹಿಂದೂ ಧರ್ಮ ಎಂದರೆ ಅವರಿಗೆ ಗೊತ್ತೇ ಇಲ್ಲ. ಹೀಗಾಗಿ, ಹಿಂದೂ‌ ಪದವನ್ನು ತೆಗೆದು ಹಾಕಬೇಕು ಎಂದು ಭಗವಾನ್ ಹೇಳಿದ್ದರು.

ಹಿಂದೂ ಧರ್ಮ ಉಳಿಯಬೇಕು ಅಂದರೆ ಮೊದಲು ಶೂದ್ರ ಎಂಬ ಪದವನ್ನು ಮನುಸ್ಮೃತಿಯಿಂದ ತೆಗೆದು ಹಾಕಬೇಕು. ಮನುಸ್ಮೃತಿಯಲ್ಲಿ ಶೂದ್ರ ಎಂದರೆ ಸೂಳೆಮಕ್ಕಳು ಎಂದರ್ಥ ಎಂದು ಹೇಳಿಕೆ ನೀಡಿದ್ದರು.

ಶ್ರೀರಾಮನು ದೇವರು ಅಲ್ಲ, ರಾಮನು ಮದ್ಯಪಾನ ಮಾಡುತ್ತಿದ್ದ. ಆತ ಮಾಂಸಾಹಾರಿ, ಮಾನಿನಿಯರ ಜೊತೆಗೆ ನೃತ್ಯ ಮಾಡುತ್ತಾ ಕಾಲ ಕಳೆಯುತ್ತಿದ್ದ ಎಂದು ಹೇಳಿದ್ದರು.

ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಿಂದೂಗಳ ಕೋಪಕ್ಕೆ ಸಾಹಿತಿ ಭಗವಾನ್ ಗುರಿಯಾಗಿದ್ದಾರೆ.

Leave a Reply

Your email address will not be published. Required fields are marked *