ಕೋರೊನಾ ವೈರಸ್ ನಿಂದ ಇಡೀ ದೇಶದ ಎಲ್ಲಾ ವರ್ಗದ ಜನರು ಒಂದಿಲ್ಲೊಂದು ಕಾರಣದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ, ಇದರಲ್ಲಿ ಚಿತ್ರರಂಗವು ಕೂಡ ಒಂದು. ಕೊಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಸ್ಟಾರ್ ನಟರ ಅನೇಕ ಚಿತ್ರಗಳು ಕೋರೊನಾ ವೈರಸ್ ಭೀತಿ ಹಾಗೂ ಲಾಕ್ ಡೌನ್ ನಿಂದಾಗಿ ಶೂಟಿಂಗ್ ಗಳನ್ನು ಅರ್ಧಕ್ಕೆ ನಿಲ್ಲಿಸಿವೆ.
ಈಗ ದೇಶದಲ್ಲಿ ಅನ್ಲಾಕ್ ಪ್ರಕ್ರಿಯೆಗಳು ಆರಂಭವಾಗಿರುವದರಿಂದ ಚಿತ್ರೋದ್ಯಮ
ಕೂಡ ತನ್ನ ಚಟುವಟಿಕೆಗಳನ್ನು ಪುನರಾರಂಭಿಸಲು ತಯಾರಿ ನಡೆಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರರಂಗ ಸಹಜ ಸ್ಥಿತಿಗೆ ಮರಳುವ ವಿಶ್ವಾಸ ಹೊಂದಿದೆ.

ನಿಮಗಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಚಾಪ್ಟರ್-2 ಚಿತ್ರೀಕರಣವನ್ನು ಲಾಕ್ ಡೌನ್ ನಿಂದಾಗಿ ಅರ್ಧಕ್ಕೆ ನಿಲ್ಲಿಸಲಾಗಿತ್ತು, ಯಶ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ -2 ಇನ್ನು 25 ದಿನಗಳ ಶೂಟಿಂಗ್ ಬಾಕಿಯಿರಿಸಿಕೊಂಡಿದೆ. ಶೇಕಡಾ 90ರಷ್ಟು ಭಾಗದ ಚಿತ್ರೀಕರಣ ಪೂರೈಸಿರುವ ತಂಡ ಇನ್ನು ಫೈಟಿಂಗ್ ದೃಶ್ಯಗಳು ಮತ್ತು ಕೆಲ ಸನ್ನಿವೇಶಗಳ ಚಿತ್ರೀಕರಣ ಉಳಿಸಿಕೊಂಡಿದೆ.
ಇದೆ ಆಗಸ್ಟ್ 15 ರಿಂದ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು ಬೆಂಗಳೂರಿನ ಮಿನರ್ವ ಮಿಲ್ಸ್ ಹತ್ತಿರ ದೊಡ್ಡ ಸೆಟ್ ಹಾಕಲಾಗಿದೆ, ಅಲ್ಲಿ ಇನ್ನುಳಿದ ಶೆಡ್ಯೂಲ್ ನ ಮೊದಲ ಭಾಗದ ಚಿತ್ರೀಕರಣ ನಡೆಯಲಿದೆ ಎಂದು ಕೆಜಿಎಫ್ ಚಾಪ್ಟರ್ 2 ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಹೇಳಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಭಾರೀ ಬಜೆಟ್ ನಲ್ಲಿ ತಯಾರಿಸಲಾಗುತ್ತಿದ್ದು, ಅಕ್ಟೋಬರ್ 23ರಂದು ಕೆಜಿಎಫ್ -2 ತೆರೆಗೆ ಬರಲಿದೆ ಎಂದು ಈ ಹಿಂದೆ ಘೋಷಿಸಿದ್ದರೂ ಆದರೆ ಇಂದಿನ ಪರಿಸ್ಥಿತಿಯಲ್ಲಿ ಅಕ್ಟೋಬರ್ 23ರಂದೆ ಚಿತ್ರ ತೆರೆಗೆ ಬರಲಿದೆಯ ಎಂದು ಚಿತ್ರ ತಂಡ ಖಚಿತಪಡಿಸಬೇಕಿದೆ.